ಕೊಲ್ಹಾಪುರ

ಮಹಾರಾಷ್ಟ್ರದ ದಕ್ಷಿಣದ ಕೊನೆಗಿರುವ ಜಿಲ್ಲೆ; ಅದೇ ಹೆಸರಿನ ಮುಖ್ಯ ಪಟ್ಟಣ. ಉ.ಅ.14030'-17014' ಮತ್ತು ಪೂ.ರೇ. 73043'-740 44' ನಡುವೆ ಇರುವ ಈ ಜಿಲ್ಲೆಗೆ ಪಶ್ಚಿಮದಲ್ಲಿ ಮಹಾರಾಷ್ಟ್ರದ ರತ್ನಾಗಿರಿ ಮತ್ತು ಉತ್ತರದಲ್ಲಿ ಸಾಂಗಲಿ ಜಿಲ್ಲೆಗಳೂ ದಕ್ಷಿಣ ಹಾಗೂ ಪೂರ್ವಗಳಲ್ಲಿ ಮೈಸೂರು ರಾಜ್ಯದ ಬೆಳಗಾಂವಿ ಜಿಲ್ಲೆಯೂ ಗಡಿಗಳು. ವಿಸ್ತೀರ್ಣ 3,141 ಚ.ಮೈ. ಜಿಲ್ಲೆಯ ಜನಸಂಖ್ಯೆ 20,44,832(1971). ಜಿಲ್ಲೆಯಲ್ಲಿ ಹನ್ನೊಂದು ತಾಲ್ಲೂಕುಗಳಿವೆ.
ಸಹ್ಯಾದ್ರಿ ಪರ್ವತಗಳ ಪೂರ್ವಕ್ಕಿರುವ ಈ ಜಿಲ್ಲೆಯಲ್ಲಿ ಚಿಕ್ಕ ದೊಡ್ಡ ಪರ್ವತಗಳಿವೆ. ಅಂಬಾ, ಘೋಂಡಾ ಮತ್ತು ಅಂಬೋಲಿ ಘಟ್ಟದ ರಸ್ತೆಗಳು ಈ ಜಿಲ್ಲೆಯನ್ನು ರತ್ನಾಗಿರಿ ಜಿಲ್ಲೆಯೊಂದಿಗೆ ಸೇರಿಸುತ್ತವೆ. ಸಹ್ಯಾದ್ರಿ ಇರುವ ಪಶ್ಚಿಮಭಾಗ ಬಿಟ್ಟರೆ ಜಿಲ್ಲೆಯ ಉಳಿದ ಭಾಗದ ಸರಾಸರಿ ಎತ್ತರ 1,200'-2,000'. ಜಿಲ್ಲೆಯಲ್ಲಿ ಅನೇಕ ನದಿಗಳು ಹುಟ್ಟಿ ಹರಿಯುತ್ತವೆ. ಭೋಗಾವತಿ, ಸರಸ್ವತಿ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶೀ-ಇವು ಮುಖ್ಯ ನದಿಗಳು. ಇವುಗಳಲ್ಲಿ ಕೆಲವು ಮುಂದೆ ಕೃಷ್ಣಾನದಿಯನ್ನು ಸೇರುತ್ತವೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸಮ ಹವೆ ಇದೆ. ಜಿಲ್ಲೆಯ ಪಶ್ಚಿಮ ಭಾಗದ ಸಹ್ಯಾದ್ರಿ ಪ್ರದೇಶದಲ್ಲಿ ವಾರ್ಷಿಕ ಮಳೆ ಸು. 250"-300" ಆದರೆ ಪೂರ್ವದ ಬಯಲುಗಳಲ್ಲಿ 30"-40" ಮಾತ್ರ. ಜಿಲ್ಲೆಯ ಪಶ್ಚಿಮಾರ್ಧದ ತಾಲ್ಲೂಕುಗಳಾದ ಶಾಹೂವಾಡಿ, ಬಾವಡಾ, ರಾಧಾನಗರಿ ಹಾಗೂ ಚಂದಗಡಗಳಲ್ಲಿ ಕುರಂದದ ಕಲ್ಲು ಇರುವ ಭೂಮಿ ಹೆಚ್ಚಾಗಿದೆ. ಈ ತಾಲ್ಲೂಕುಗಳಲ್ಲಿ ಚಿಕ್ಕಪುಟ್ಟ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಅರಣ್ಯಗಳಲ್ಲಿಯ ಸಸ್ಯಸಂಪತ್ತು ವೈವಿಧ್ಯಮಯ. ಹುಲಿ, ಚಿರತೆ ಮುಂತಾದ ಮೃಗಗಳು ಕಾಣಸಿಗುವ ಕೆಲವೇ ಕಾಡುಗಳಲ್ಲಿ ಇದೂ ಒಂದು. ಜಿಲ್ಲೆ ಕೃಷಿಪ್ರಧಾನ. ನೀರಾವರಿ ಸೌಲಭ್ಯ ತಕ್ಕಮಟ್ಟಿಗೆ ಉಂಟು. ಕಬ್ಬು, ಬತ್ತ, ತಂಬಾಕು, ಶೇಂಗ, ಹತ್ತಿ-ಇವು ಮುಖ್ಯ ಉತ್ಪನ್ನಗಳು. ಕೆಲವು ಕಡೆ ದ್ರಾಕ್ಷಿ, ನಿಂಬೆ ತೋಟಗಳಿವೆ. ಜಿಲ್ಲೆಯಲ್ಲಿ ಒಂದು ಬಟ್ಟೆಯ ಗಿರಣಿ, 10ಕ್ಕಿಂತ ಹೆಚ್ಚು ಎಣ್ಣೆಗಿರಣಿಗಳು ಮತ್ತು 6 ಸಕ್ಕರೆ ಕಾರ್ಖಾನೆಗಳು ಇವೆ. ಚಲನಚಿತ್ರ ಕೈಗಾರಿಕೆಗೂ ಜಿಲ್ಲೆ ಪ್ರಸಿದ್ಧ.

ಜಿಲ್ಲೆಯಲ್ಲಿ ಸಂಪರ್ಕಮಾರ್ಗಗಳ ವ್ಯವಸ್ಥೆ ಚೆನ್ನಾಗಿದೆ. ಸು.1,000 ಮೈ.ಉದ್ದದ ರಸ್ತೆಗಳಿರುವ ಈ ಜಿಲ್ಲೆಯಲ್ಲಿ ಬೆಂಗಳೂರು-ಪುಣೆ, ಕೊಲ್ಹಾಪುರ-ಮಿರಜ್ ಹೆದ್ದಾರಿಗಳು ಮುಖ್ಯ. ರತ್ನಾಗಿರಿ ಜಿಲ್ಲೆಗೆ ಹೋಗುವ ಅನೇಕ ಮಾರ್ಗಗಳು ಈ ಜಿಲ್ಲೆಯ ಮೂಲಕ ಹಾದು ಹೋಗುತ್ತವೆ.

ಈ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಅನೇಕ. ಐತಿಹಾಸಿಕ ಸ್ಮಾರಕಗಳಿಗೆ ಲೆಕ್ಕವಿಲ್ಲ. ಜಿಲ್ಲೆಯಲ್ಲಿ 35 ಕೋಟೆಗಳಿವೆ. ಶಿವಾಳಗಡ, ಪನ್ಹಾಳಗಡ, ಗಗನಗಡ, ರಾಂಗಣಾ ಕೋಟೆ, ಖಿದ್ರಾಪುರದ ದೇವಸ್ಥಾನ, ಬಹಿರೇಶ್ವರ ದೇವಾಲಯ, ಸಾಂಗವಡದ ನೃಸಿಂಹ ದೇವಾಲಯ, ಬಾಹುಬಲಿಯ ಬಾಹುಬಲಿಮೂರ್ತಿ, ಕೊಲ್ಹಾಪುರದ ಮಹಾಲಕ್ಷ್ಮೀದೇವಾಲಯ-ಇವು ಪ್ರೇಕ್ಷಣೀಯವಾಗಿದೆ.

ಕೊಲ್ಹಾಪುರ ಪಟ್ಟಣದ ಜನಸಂಖ್ಯೆ 2,59,068 (1971). ಈ ಪಟ್ಟಣದ ಉದಯವಾದ್ದು ಧಾರ್ಮಿಕ ಕೇಂದ್ರವಾಗಿ, ಟಾಲೆಮಿ ಇದನ್ನು ವ್ಯಾಪಾರ ಕೇಂದ್ರವೆಂದು ಉಲ್ಲೇಖಿಸಿದ್ದಾನೆ. ಅಕ್ಕಡಿಕಾಳು, ಮೆಣಸಿನಕಾಯಿ, ನೆಲಗಡಲೆ, ಅಕ್ಕಿ, ಗೋದಿ, ಕಬ್ಬು-ಇವು ಇಲ್ಲಿ ಮಾರಾಟವಾಗುತ್ತವೆ. ಇದು ಮಹಾರಾಷ್ಟ್ರದಲ್ಲಿಯೇ ದೊಡ್ಡದಾದ ಬೆಲ್ಲದ ಪೇಟೆ. ಇಲ್ಲಿ ಎಣ್ಣೆಯ ಗಿರಣಿಗಳಿವೆ. ಶ್ರೀ ಶಾಹು ಛತ್ರಪತಿಮಿಲ್ಸ್, ಕೊಲ್ಹಾಪುರ ಸಕ್ಕರೆ ಕಾರ್ಖಾನೆ, ಪಾತೊ ಎಂಜಿನಿಯರಿಂಗ್ ವಕ್ರ್ಸ್-ಇವು ಇಲ್ಲಿಯ ಮುಖ್ಯ ಕಾರ್ಖಾನೆಗಳು. ಎಂಜಿನಿಯರಿಂಗ್ ಉದ್ಯಮ ಭರದಿಂದ ಬೆಳೆಯುತ್ತಿದೆ. ಮರಾಠಿ ಚಲನಚಿತ್ರಗಳ ತಯಾರಿಕೆ ಆರಂಭವಾದ್ದು ಕೊಲ್ಹಾಪುರದಲ್ಲಿ.

1854ರಲ್ಲಿ ಅಕ್ಟೋಬರ್ 12ರಂದು ಜಾರ್ಜ್ ಮಾಲ್ಕಂ ಇಲ್ಲಿ ನಗರಸಭೆಯನ್ನು ಸ್ಥಾಪಿಸಿದ. ಅಂದಿನಿಂದ ಇದರ ವ್ಯಾಪ್ತಿ ಬೆಳೆಯುತ್ತಿದೆ. ಪುಣೆ-ಬೆಂಗಳೂರು, ರತ್ನಾಗಿರಿ-ಬಿಜಾಪುರ ರಾಷ್ಟ್ರೀಯ ಹೆದ್ದಾರಿಗಳು ಈ ನಗರದ ಮೂಲಕ ಹಾದು ಹೋಗುತ್ತವೆ. ಪುಣೆಯಿಂದ 180 ಮೈ ಮತ್ತು ಮಿರಜದಿಂದ 30 ಮೈ ದೂರದಲ್ಲಿರುವ ಇದು ದಕ್ಷಿಣ ರೈಲ್ವೆಯ ಕೊನೆಯ ನಿಲ್ದಾಣ.

ನಗರದಲ್ಲಿ ಮತ್ತು ಅದರ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳೂ ನಿಸರ್ಗ ರಮ್ಯ ಸ್ಥಳಗಳೂ ಇವೆ. ಕೊಲ್ಹಾಪುರ ಮಹತ್ತ್ವದ ವಿದ್ಯಾಕೇಂದ್ರ. ನಾಲ್ಕು ಕಲಾ ಮತ್ತು ವಿಜ್ಞಾನ ಕಾಲೇಜುಗಳೂ ಒಂದು ವಾಣಿಜ್ಯ ಕಾಲೇಜೂ ಒಂದು ನ್ಯಾಯಶಾಸ್ತ್ರ ಕಾಲೇಜೂ ಒಂದು ಶಿಕ್ಷಣ ಕಾಲೇಜೂ ಇಲ್ಲಿವೆ. ಅನೇಕ ಪ್ರಾಥಮಿಕ ಮಾಧ್ಯಮಿಕ ಶಾಲೆಗಳುಂಟು. ದಕ್ಷಿಣ ಮಹಾರಾಷ್ಟ್ರದ ಐದು ಜಿಲ್ಲೆಗಳಿಗಾಗಿ ಸ್ಥಾಪಿಸಲಾದ ಶಿವಾಜಿ ವಿಶ್ವವಿದ್ಯಾಲಯದ ಕೇಂದ್ರವಿದು.
(ಎಂ.ಜಿ.ಬಿ.; ಜಿ.ಎಚ್.)

ಇತಿಹಾಸ : 10ನೆಯ ಶತಮಾನದ ಆದಿಕಾಲದಿಂದ 13ನೆಯ ಶತಮಾನದ ಆದಿಕಾಲದ ವರೆಗೆ ಕೊಲ್ಹಾಪುರ ಶಿಲಾಹಾರ ವಂಶಕ್ಕೆ ಸೇರಿದ ರಾಜರ ಆಡಳಿತಕ್ಕೆ ಒಳಪಟ್ಟಿತ್ತು. ಸು.1212ರಲ್ಲಿ ಕೊಲ್ಹಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ದೇವಗಿರಿಯ ಯಾದವರ ಕೈಸೇರಿತು. ಈ ಹಿಂದೂ ರಾಜವಂಶೀಯರ ತರುವಾಯ ಬಹಮನಿಯ ಮುಸ್ಲಿಂ ದೊರೆಗಳು ಕೊಲ್ಹಾಪುರವನ್ನು ಗೆದ್ದು ಆಳತೊಡಗಿದರು. ಬಹಮನಿ ರಾಜ್ಯ ಒಡೆದುಹೋದಾಗ ಇದು ಬಿಜಾಪುರದ ಸುಲ್ತಾನರ ಕೈವಶವಾಯಿತು. 1659ರಲ್ಲಿ ಕೊಲ್ಹಾಪುರದ ಕೋಟೆ ಶಿವಾಜಿಯ ವಶಕ್ಕೆ ಬಂದಿತ್ತು ಅನಂತರ ಅದು ಮೊಗಲರ ವಶವಾಗಿ ಮತ್ತೆ ಮರಾಠರ ಅಧೀನಕ್ಕೆ ಬಂತು.

ಕೊಲ್ಹಾಪುರದಲ್ಲಿ ಹೀಗೆ ತಮ್ಮ ಆಡಳಿತ ಪ್ರಾರಂಭಿಸಿದ ಮರಾಠಿ ರಾಜರು ಶಿವಾಜಿಯ ಕಿರಿಯ ಮಗನಾದ ರಾಜಾರಾಮನ ವಂಶಸ್ಥರಾಗಿದ್ದರು. 1700ರಲ್ಲಿ ರಾಜಾರಾಂ ಮರಣ ಹೊಂದಿದ ತರುವಾಯ, ಆತನ ಹೆಂಡತಿ ತಾರಾಬಾಯಿ ತನ್ನ ಮಗನಾದ 2ನೆಯ ಶಿವಾಜಿಯನ್ನು ಕೊಲ್ಹಾಪುರದ ಸಿಂಹಾಸನಕ್ಕೆ ತಂದಳು. ಇವನಿಗೂ ಸಾಂಬಾಜಿಯ ಮಗನಾದ ಸಾಹುವಿಗೂ ಸಿಂಹಾಸನದ ಹಕ್ಕಿಗೆ ಹೋರಾಟವಾಗಿ, ಕಡೆಗೆ ರಾಜ್ಯ ಎರಡು ಪಾಲಾಗಿ, ಸಾಹು ಸಾತಾರದಿಂದ ಆಳುವುದೆಂದು ಒಪ್ಪಂದವಾಯಿತು. ಆದರೂ ಕೊಲ್ಹಾಪುರ ಮತ್ತು ಸಾತಾರಗಳ ನಡುವೆ ಅನೇಕ ವರ್ಷಗಳ ವರೆಗೆ ತಿಕ್ಕಾಟ ನಡೆದು, 1739ರಲ್ಲಿ ಕೊಲ್ಹಾಪುರ ಒಂದು ಸ್ವತಂತ್ರ ರಾಜ್ಯವೆಂದು ಸಾಹುವಿನಿಂದ ಘೋಷಿತವಾಯಿತು. 1760ರಲ್ಲಿ ರಾಜಾರಾಮನ ಚಿಕ್ಕಮಗ ಮರಣಹೊಂದಿದಾಗ ಶಿವಾಜಿಯ ವಂಶದವರ ಆಡಳಿತ ಕೊನೆಗೊಂಡು, ಭೋಂಸ್ಲೆ ಮನೆತನದವನಾದ 3ನೆಯ ಶಿವಾಜಿ ಆಡಳಿತ ನಡೆಸತೊಡಗಿದ. 1765 ಮತ್ತು 1792ರಲ್ಲಿ ಬ್ರಿಟಿಷರು ಕೊಲ್ಹಾಪುರದಲ್ಲಿದ್ದ ದರೋಡೆಕಾರರನ್ನು ನಿರ್ಮೂಲ ಮಾಡಬೇಕೆಂದು ಸೈನ್ಯ ಕಳುಹಿಸಿದರು. ಕೊಲ್ಹಾಪುರದ ರಾಜ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ಬ್ರಿಟಿಷ್ ವರ್ತಕರಿಗೆ ಪರಿಹಾರ ಕೊಟ್ಟನಲ್ಲದೆ ಮಾಲ್ವಾನ್ ಮತ್ತು ಕೊಲ್ಹಾಪುರಗಳಲ್ಲಿ ಕೋಟೆಗಳನ್ನು ತೆರೆಯಲು ಅಪ್ಪಣೆ ಕೊಟ್ಟ. ಒಳಜಗಳಗಳಿಂದಲೂ ದುರಾಡಳಿತಗಳಿಂದಲೂ ತುಂಬಿದ್ದ ಕೊಲ್ಹಾಪುರ ರಾಜ್ಯ 1862ರಲ್ಲಿ 4ನೆಯ ಶಿವಾಜಿಯ ಕಾಲದಲ್ಲಿ ಸಂಪೂರ್ಣವಾಗಿ ಬ್ರಿಟಿಷರ ನಿಯಂತ್ರಣಕ್ಕೊಳಪಟ್ಟಿತು. ಆದರೂ ದೇಶೀಯ ರಾಜರು ನೆಪಮಾತ್ರಕ್ಕೆ ಆಡಳಿತ ನಡೆಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ, ಕೊಲ್ಹಾಪುರ ಮುಂಬಯಿಯಲ್ಲಿ ವಿಲೀನವಾಯಿತು. ಈಗ ಇದು ಮಹಾರಾಷ್ಟ್ರ ರಾಜ್ಯದ ಒಂದು ಭಾಗ.
(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ